ಏಲಕ್ಕಿ ಬೆಟ್ಟ: ನೀಲಗಿರಿ ಬೆಟ್ಟಗಳ ದಕ್ಷಿಣಕ್ಕೆ, ಪಾಲ್ಘಾಟ್ ಕಣಿವೆಯಿಂದಾಚೆಗಿರುವ ಬೆಟ್ಟಗಳಲ್ಲೊಂದು. (ಕಾರ್ಡಮಂ ಹಿಲ್ಸ್‌). ಅಣ್ಣಾಮಲೈ ಮತ್ತು ಪಾಲಂ ಈ ಗುಂಪಿನ ಇನ್ನೆರಡು ಬೆಟ್ಟಗಳು. ಈ ಬೆಟ್ಟಗಳ ಪೈಕಿ ಇದೇ ಅತ್ಯಂತ ದಕ್ಷಿಣಕ್ಕಿದೆ. ಏಲಕ್ಕಿ ಬೆಟ್ಟದ ಮೈಯೂ ವೈಗೈ ನದಿಯ ದಕ್ಷಿಣಕ್ಕಿರುವ ಈ ಬೆಟ್ಟದ ಚಾಚುಭಾಗವೂ ಬಲು ಕಡಿದು. ಆದರೆ ಇದರ ವಾಯವ್ಯಭಾಗ ಆಗ್ನೇಯಾಭಿಮುಖವಾಗಿ ಹಬ್ಬಿ ಎತ್ತರದ ಕಣಿವೆಗಳನ್ನೊಳಗೊಂಡಿದೆ. ಇಲ್ಲಿಯ ನದಿಗಳ (ಉದಾ: ಪೆರಿಯಾರ್) ಹರಿವು ನೇರ; ಉತ್ತರದಿಂದ ದಕ್ಷಿಣಾಭಿಮುಖಿ. ನದಿಗಳ ಅಡ್ಡಕ್ಕೆ ಹಬ್ಬಿರುವ ಕಮರಿಗಳಿಂದಾಗಿ ಇಡೀ ಪ್ರದೇಶ ಅಪ್ಪಟ ಜಾಲರಿಗಳೋಪಾದಿಯಲ್ಲಿದೆ. ಈ ಬೆಟ್ಟದ ಪುರ್ವ ಪಶ್ಚಿಮ ಬದಿಗಳ ಇಳಿಜಾರುಗಳಲ್ಲಿ ಪ್ಲಾಂಟೇಷನ್ಗಳುಂಟು. ಆದರೆ ಇವು ಪಶ್ಚಿಮದ ಬದಿಯಲ್ಲಿ ಹೆಚ್ಚು. ಇಲ್ಲಿನ ಕಣಿವೆಗಳು ಬೇಸಾಯಕ್ಕೆ ಮೀಸಲು. ಇಳಿಜಾರಿನ ಕೆಳಭಾಗಗಳಲ್ಲಿ 80"-120" ಮಳೆ ಬೀಳುವಲ್ಲೆಲ್ಲ, 1,300 ಮೀಟರ್ ಎತ್ತರದವರೆಗೆ ರಬ್ಬರ್ ಬೆಳೆಸುತ್ತಾರೆ. ಅಲ್ಲಿಂದ ಮೇಲುಗಡೆಗೆ-2,000 ಮೀಟರ್ ಎತ್ತರದವರೆಗೆ 100"-150" ಮಳೆಯಾಗುವಲ್ಲೆಲ್ಲ ಚಹ ಮುಖ್ಯಬೆಳೆ. 			(ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ